(ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ ಗಣಿತವೆಂದರೆ ರಸಭರಿತವಾದ ಕಬ್ಬು )
ವೈಜ್ಞಾನಿಕ ಅಭಿವೃದ್ಧಿಯತ್ತ ಮೊಗ ಮಾಡಿ ಇಂದಿನ ಜಗತ್ತು ಧಾವಂತದಿ ದಾಪುಗಾಲಿಡುತ್ತಿದೆ. ದಿನದಿಂದ ದಿನಕ್ಕೆ ನಡೆಯುತ್ತಿರುವ ಬದಲಾವಣೆಗೆ ತನ್ನನ್ನು ತಾನು ಒಗ್ಗೂಡಿಸಿಕೊಂಡು ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಂಡು ಮುಂದೆ ಸಾಗುತ್ತಿರುವ 21ನೇ ಶತಮಾನದ ಸಂದರ್ಭವಿದು.
ವೈಜ್ಞಾನಿಕ ಕ್ಷೇತ್ರದ ನಾಗಾಲೋಟಕ್ಕೆ ಭಾರತೀಯರು ಮಹತ್ತರವಾದ ಕೊಡುಗೆಗಳನ್ನು ಬಹು ಪೂರ್ವದಿಂದಲೇ ನೀಡುತ್ತಾ ಬಂದಿದ್ದಾರೆ. ಪಾಶ್ಚಾತ್ಯ ಲೋಕದ ವಿಜ್ಞಾನಿಗಳಲ್ಲಿ ಮೂರ್ಧನ್ಯರಾದ ಆಲ್ಬರ್ಟ್ ಐನ್ಸ್ಟೈನ್ ಅವರ ಈ ಮಾತು “We owe a lot to the Indians who taught us how to count without which no worth while scientific discovery could have been made” ಭಾರತೀಯರ ಗಣಿತದ ಕೊಡುಗೆಗಳು ವಿಜ್ಞಾನವನ್ನು ಮತ್ತಷ್ಟು ಮೇಲೆತ್ತುವಲ್ಲಿ ಹೇಗೆ ಸಹಕಾರಿ ಆದವು ಎಂಬುದನ್ನು ಪ್ರತಿಬಿಂಬಿಸುತ್ತಿದೆ.
ವಿಜ್ಞಾನ ಮತ್ತು ಗಣಿತ ಒಂದೇ ನಾಣ್ಯದ ಎರಡು ಮುಖಗಳು ಒಂದರ ಅಸ್ತಿತ್ವವನ್ನು, ಮಹತ್ವವನ್ನು ಮತ್ತೊಂದು ಹೇಗೆ ತೋರಿಸಬಲ್ಲದು ಹಾಗೂ ಹೆಚ್ಚಿಸಬಲ್ಲದು ಎಂಬುದನ್ನು ಪರಸ್ಪರ ಪೂರಕವಾಗಿ ಇವುಗಳು ತೋರಿಸಿ ಕೊಡುತ್ತವೆ.
ಆರ್ಯಭಟ, ವರಾಹಮಿಹಿರ, ಭಾರತೀ ಕೃಷ್ಣತೀರ್ಥರು, ಭಾಸ್ಕರಾಚಾರ್ಯ, ಮಹಾವೀರಾಚಾರ್ಯ, ಚತುರ್ವೇದ ಪೃಥೂದಕಸ್ವಾಮಿ, ಶ್ರೀಧರಾಚಾರ್ಯ ಮುಂತಾದ ಮಹಾಗಣಿತಜ್ಞರಿಂದ ಭಾರತೀಯ ಗಣಿತ ಕ್ಷೇತ್ರವು ತನ್ನ ವೈಭವೋಪೇತ ಸಾಮ್ರಾಜ್ಯವನ್ನು ಮತ್ತಷ್ಟು ಶ್ರೀಮಂತ ಗೊಳಿಸಿಕೊಂಡು ಕಂಗೊಳಿಸಿದೆ. ಇಂತಹ ಮಹಾನ್ ಗಣಿತಜ್ಞರ ಕೊಡುಗೆಗಳ ಬಳಿಕ ಭಾರತೀಯರು ಗಣಿತ ಕ್ಷೇತ್ರದಲ್ಲಿ ಯಾವುದೇ ರೀತಿಯಾದ ಸಾಧನೆಯನ್ನಾಗಲಿ ಮಾಡಿಲ್ಲ, ಕೊಡುಗೆಯಾಗಲಿ ನೀಡಿಲ್ಲ ಎನ್ನುವಂತಹ ಪೊಳ್ಳುವಾದವನ್ನು ಮೂಲ ಸಹಿತವಾಗಿ ನಿರಾಕರಿಸಲೆಂದು ಭಾರತೀಯರ ಸಾಧನೆಗಳು ನಿರಂತರವಾಗಿ ಎಲೆಮರೆಯ ಕಾಯಿಯಂತೆ ಇಂದಿಗೂ ನಡೆಯುತ್ತಲಿದ್ದು ಅವುಗಳನ್ನು ತೆರೆಯ ಮೇಲೆ ತರುವ ಪ್ರಯತ್ನ ಹಾಗೂ ನಮ್ಮ ಋಷಿ ಪರಂಪರೆ ನಮಗೆ ನೀಡಿರುವ ಸಂದೇಶವಾದ “ಜ್ಞಾನಾರ್ಜನೆಯ ಫಲವು ಆತ್ಮತೃಪ್ತಿ” ಎಂಬುದನ್ನು ಕಿಶೋರ ಹಾಗೂ ಯುವಜನತೆಗೆ ತಲುಪಿಸಬೇಕಾದ ಅನಿವಾರ್ಯತೆ ಅವಶ್ಯಕತೆ ಎರಡೂ ಇಂದಿನ ಸಂದರ್ಭದಲ್ಲಿದೆ. ಅದನ್ನೇ ಮೂಲ ಉದ್ದೇಶವಾಗಿರಿಸಿಕೊಂಡು ಶ್ರೀಯುತ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನವಾದ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನ ಎಂದು ಆಚರಿಸಲಾಗುತ್ತಿದೆ.
ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನವನ್ನೇ ಏಕೆ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಬೇಕು ಎಂದು ಆಲೋಚಿಸಿದರೆ ಶ್ರೀನಿವಾಸ ರಾಮಾನುಜನ್ ಅವರ ಸಾಧನೆಗಳ ಪಟ್ಟಿಯೆಡೆಗೆ ನಾವೊಮ್ಮೆ ಕಣ್ಣು ಹಾಯಿಸಬೇಕು. ಜನಸಾಮಾನ್ಯರಾದ ನಮಗೆ ಅವುಗಳ ಆಳ ಅರ್ಥವಾಗದೆ ಇದ್ದ ಪಕ್ಷದಲ್ಲಿಯೂ ನಮ್ಮವರ ಸಾಧನೆಯ ಕುರಿತಾಗಿ ಹೆಮ್ಮೆ ಮೂಡುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.
ಭಿನ್ನರಾಶಿಗಳು, ಪ್ರಭಿನ್ನರಾಶಿಗಳು, ಅನಂತ ಸರಣಿಗಳು, ಪೈ, e – ಇನ್ನಷ್ಟು ಮತ್ತಷ್ಟು ಸಾಧನೆಗಳು ವಾಮನ ರೂಪದಿಂದ ತ್ರಿವಿಕ್ರಮನಾಗಿ ಬೆಳೆಯುತ್ತಾ ಹೋಗುತ್ತವೆ ರಾಮಾನುಜನ್ ಅವರ “3900” ಸೂತ್ರಗಳು ಗಣಿತ ಲೋಕದಲ್ಲಿ ಮಹತ್ತರವಾದ ಬಿರುಗಾಳಿಯನ್ನೇ ಎಬ್ಬಿಸಿ ತಮ್ಮದೇ ಆದ ಛಾಪು ಮೂಡಿಸಿವೆ. ಎಲ್ಲಾ ಸಾಧನೆಗಳ ಮಹಾಪೂರ ಶ್ರೀ ರಾಮಾನುಜನ್ ಆದರೂ ನಮ್ಮ ಪೀಳಿಗೆಗೆ ಅದರ ಕುರಿತಾದ ಅರಿವಿನ ಕೊರತೆ ಇರುವುದು ವಿಷಾದವೇ ಸರಿ. ಅಜ್ಞಾನವನ್ನು ಕಳೆದು ನಮ್ಮ ಪೂರ್ವಜರ ಮಹತ್ವವನ್ನು ಮತ್ತೊಮ್ಮೆ ಮೆಲುಕು ಹಾಕುವ ಸಮಯ ಕೈಗೂಡಿಬಂದಿದೆ. ಗಣಿತದ ಹಬ್ಬವನ್ನು ಆಚರಿಸಲು, ನಮ್ಮ ಸಾಧಕರನ್ನು ನೇಪಥ್ಯದಿಂದ ಮುಖ್ಯ ವೇದಿಕೆಗೆ ತರಲು ಇರುವ ಸದವಕಾಶವೇ “ರಾಷ್ಟ್ರೀಯ ಗಣಿತ ದಿನ
ಬನ್ನಿ ನಮ್ಮ ಪೂರ್ವಜರನ್ನು ನಮಗೆ ನಮ್ಮ ಜಗತ್ತಿಗೆ ಪರಿಚಯಿಸೋಣ ಅವರ ಸಾಧನೆಯ ಪಥದಲ್ಲಿ ಹೆಜ್ಜೆ ಹಾಕುವ ಪ್ರಯತ್ನದಲ್ಲಿ ನಮ್ಮನ್ನು ನಾವು ಜೋಡಿಸಿಕೊಳ್ಳೋಣ.
ಸಿಂಚನಾ ಭಟ್ ಕೆ.ಯು
ಮಾತೃಶ್ರೀ
ಮೈತ್ರೇಯೀ ಗುರುಕುಲಮ್
[…]
Read More… from ರಾಷ್ಟ್ರೀಯ ಗಣಿತ ದಿನ