ಆಹಾರನಿದ್ರಾಭಯಮೈಥುನಾನಿ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ |
ಜ್ಞಾನಂ ನರಾಣಾಮಧಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಭಿಸ್ಸಮಾನಾಃ ||
ಎಂಬ ಸುಭಾಷಿತ ಜ್ಞಾನ – ಎಂದರೆ ಬುದ್ಧಿಯನ್ನು ವಿಶೇಷವಾಗಿ ಪಡೆದ ಮಾನವ ಪಶುಗಳಿಗಿಂತ ವಿಶೇಷನೆನಿಸುತ್ತಾನೆ ಎಂದು ಹೇಳುತ್ತದೆ. ಬುದ್ಧಿಯಿಂದಲೇ ಶ್ರೇಷ್ಠನೆನಿಸಿದ ಮಾನವ ಯಾವುದನ್ನಾದರೂ ಮಾಡಲು ಅಥವಾ ಮಾಡದೇ ಇರಲು ಸ್ವತಂತ್ರನಾಗಿದ್ದಾನೆ. ಆದ್ದರಿಂದ ಅವನು ಮೇಲೇರುವ ಸಾಧ್ಯತೆ ಎಷ್ಟಿದೆಯೋ ಅವನು ಪತನ ಹೊಂದುವ ಸಾಧ್ಯತೆಯೂ ಆಷ್ಟೇ ಇದೆ. ಹಾಗಾಗಿಯೇ ಜಗತ್ತಿನ ಯಾವುದೇ ಜಾಗದ ಇತಿಹಾಸವನ್ನು ತಿರುಗಿಸಿ ನೋಡಿದರೂ ಎಲ್ಲೂ ಒಳಿತೊಂದೆ ಇದ್ದ ಅಥವಾ ಕೆಡುಕೊಂದೇ ಇದ್ದ ಬದುಕು ಕಾಣುವುದಿಲ್ಲ. ಸಮುದ್ರದಲೆಯಂತೆ ಒಳಿತು ಕೆಡುಕುಗಳು ಒಂದರಮೇಲೊಂದರಂತೆ ನಿರಂತರವಾಗಿ ಬರುತ್ತಿವೆ. ಭಾರತದ ಸ್ಥಿತಿಯೇನೂ ಇದಕ್ಕೆ ಹೊರತಾಗಿಲ್ಲ.
ಒಂದೆಡೆ ರಾಷ್ಟ್ರೀಯತೆಯ ಹೆಸರಲ್ಲಿ ಜಾತ್ಯತೀತತೆ ಕಂಡು ಬಂದರೆ, ಮತ್ತೊಂದೆಡೆ ಜಾತಿ-ಮತ-ಪಂಥಗಳೆಂಬ ಭೇದಭಾವ.!! ಒಂದೆಡೆ ನಾಗರೀಕರಣದ ಹೆಸರಲ್ಲಿ ನಗರಗಳ ಅಭಿವೃದ್ಧಿ, ಅದೇ ನಗರದ ಇನ್ನೊಂದೆಡೆ ಅಸ್ವಚ್ಛತೆಯ ಪರಮಾವಧಿ!! ಒಂದೆಡೆ ತೊಡುವ ಬಟ್ಟೆಗಳಿಗೆ ಹಾಕುವ ಚಪ್ಪಲಿಗಳಿಗೆ ವಿದ್ಯುದ್ದೀಪದ ಅಲಂಕಾರ, ಮತ್ತೊಂದೆಡೆ ಚಿಮಿಣಿ ದೀಪದಲ್ಲೇ ಬದುಕ ಸವೆಸುತ್ತಿರುವವರ ಹಾಹಾಕಾರ!! ಒಂದೆಡೆ ಅಯೋಗ್ಯನಾದರೂ ಹಣವಂತನಾದುದಕೆ ಹೊಗಳಿಕೆ, ಮತ್ತೊಂದೆಡೆ ಯೋಗ್ಯನಾದರೂ ಬಡವನಾದುದಕೆ ತೆಗಳಿಕೆ……ಇದೆಲ್ಲಾ ಮಾನವ, ಬುದ್ಧಿಯ ಕಾರಣದಿಂದ ಸ್ವತಂತ್ರನಾದುದರ ಫಲವಾಗಿದೆ. ಹೀಗೆ ಕೆಡುಕು ರಾರಾಜಿಸಿದಾಗಲೆಲ್ಲಾ ಒಳಿತು ಅದನ್ನು ಮೆಟ್ಟಿ ತಾನೆದ್ದು ನಿಲ್ಲುವುದೂ ಕೂಡ ಜಗತ್ತಿನ ಸಹಜತೆಯಾಗಿದೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || – ಎಂಬುದು ಕೃಷ್ಣವಾಣಿ.
ಹೀಗೆ ಕೆಡುಕಿನ ಮೇಲೆ ಒಳಿತಿನ ಆಧಿಪತ್ಯದ ಹಾದಿಯೇ ಕ್ರಾಂತಿ ಎಂದು ಕರೆಯಲ್ಪಡುತ್ತದೆ. ಈ ಕ್ರಾಂತಿ ಉತ್ತಮವಾಗಿಯೂ ಹಿತಕರವಾಗಿಯೂ ಇದ್ದಲ್ಲಿ ಇದೇ ಸಂಕ್ರಾಂತಿ ಎನಿಸುತ್ತದೆ. ಸಂಕ್ರಾಂತಿಯ ಈ ಸಂದರ್ಭದಲ್ಲಿ ಹೇಗೆ ಭಗವಾನ್ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕೆ ಕ್ರಮಿಸುತ್ತಾನೋ ಹಾಗೆ ಸಮಾಜದಲ್ಲೂ ಕೂಡ ಇಂದು ಕ್ರಾಂತಿ ಆಗಬೇಕಾಗಿದೆ.
ಭೇದ ಭಾವ ರಾರಾಜಿಸುತ್ತಿರುವ ಸಮಾಜದಲ್ಲಿ ಸಮಾನತೆಯ ಕ್ರಾಂತಿ……….. ಹಣವಂತನೇ ಶ್ರೇಷ್ಠ ಎನ್ನುತ್ತಿರುವ ಸಮಾಜದಲ್ಲಿ ಗುಣವಂತನೇ ಶ್ರೇಷ್ಠ ಎನ್ನುವ ಕ್ರಾಂತಿ……….. ಹೆಣ್ಣನ್ನು ಭೋಗವಸ್ತುವಾಗಿ ನೋಡುತ್ತಿರುವ ಸಮಾಜದಲ್ಲಿ ಆಕೆಯನ್ನು ಗೌರವಿಸುವ ಕ್ರಾಂತಿ……….. ಆಧುನಿಕತೆ ಎಂದು ತಂತ್ರಜ್ಞಾನದ ಹಿಂದೆ ಓಡುತ್ತಿರುವ ಈ ಕಾಲದಲ್ಲಿ ಪ್ರಕೃತಿಯತ್ತ ಹಿಂದಿರುಗುವ ಕ್ರಾಂತಿ……….. ರೋಗಕ್ಕೆ ಮಾತ್ರ ಯೋಗ ಮದ್ದಾಗದೇ ಯೋಗವೇ ಜೀವನವಾಗುವ ಕ್ರಾಂತಿ……….. ಶಿಕ್ಷಣ ಉದ್ಯೋಗಕ್ಕಾಗಿ ಎಂದು ಭ್ರಮಿಸುವ ಸಮಾಜದಲ್ಲಿ ಶಿಕ್ಷಣ ಆತ್ಮ ವಿಕಾಸಕ್ಕಾಗಿ ಎನ್ನುವ ಕ್ರಾಂತಿ……….. ಸಮಾಜದಲ್ಲಿ ಆಗಬೇಕಾಗಿದೆ.
ಕತ್ತಲಿನಿಂದ ಬೆಳಕಿನೆಡೆಗೆ ನಾವೆಲ್ಲಾ ಸಾಗಬೇಕಾಗಿದೆ. ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಸಮಾಜದೊಂದಿಗೆ ನಾನೂ ಕೆಡುಕಿನಿಂದ ಒಳಿತಿನೆಡೆಗೆ ಸಾಗುತ್ತೇನೆ, ತನ್ಮೂಲಕ ನನ್ನಲ್ಲಿ ಮತ್ತು ಸಮಾಜದಲ್ಲಿ ಸಂಕ್ರಾಂತಿಯನ್ನುಂಟುಮಾಡುತ್ತೇನೆ ಎಂದು ಪ್ರತಿಜ್ಞೆಗೈದು ಒಳಿತಿನತ್ತ ಕ್ರಮಿಸೋಣ……ಕ್ರಮಿಸುತ್ತಾ ಕ್ರಮಿಸುತ್ತಾ ಆಗಸದೆತ್ತರಕೆ ಏರೋಣ…..ಎಳ್ಳು ಬೆಲ್ಲ ಸವಿದು ಒಳ್ಳೆ ಮಾತಾಡೋಣ….
ಧನ್ಯವಾದಗಳು
ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು…….
ವಿದ್ಯಾಧರೆ
ವಿದ್ಯಾರ್ಥಿನಿ
ಮೈತ್ರೇಯೀ ಗುರುಕುಲ