ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗ

Share:

ಕರ್ನಾಟಕ ಗುರುಕುಲ ಪ್ರಕಲ್ಪ

ದಿನಾಂಕ 15-05-2024 ರಿಂದ 19-05-2024 ರವರೆಗೆ
ಗುರುಕುಲಗಳ ಕಾರ್ಯಕಲಾಪಗಳಲ್ಲಿ ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆಯಾಯ ಗುರುಕುಲಗಳಲ್ಲಿ ಪ್ರತ್ಯೇಕವಾಗಿ ಮಾಸಿಕ ಪ್ರಶಿಕ್ಷಣದ ಸಂಯೋಜನೆಯಾಗುತ್ತಿದ್ದು, ವರ್ಷದಲ್ಲಿ ಒಂದುಬಾರಿ ಎಲ್ಲಾ ಗುರುಕುಲಗಳ ಆಚಾರ್ಯ-ಮಾತೃಶ್ರೀಯವರು ಸೇರಿ ಐದುದಿನಗಳ ವಾರ್ಷಿಕ ಪ್ರಶಿಕ್ಷಣ ನಡೆಸುವ ಪರಿಪಾಠವಿದೆ. ಈ ವರ್ಷ ಮೈತ್ರೇಯೀ ಗುರುಕುಲ, ಪ್ರಬೋಧಿನೀ ಗುರುಕುಲ, ವೆದವಿಜ್ಞಾನ ಗುರುಕುಲ, ಆಂಧ್ರಪ್ರದೇಶದ ಋಷಿವಾಟಿಕಾ ಗುರುಕುಲ ಮತ್ತು ಬೆಳಗಾವಿಯ ವೃಂದಾರಣ್ಯ ಗುರುಕುಲ ಹೀಗೆ ಒಟ್ಟು ಐದು ಗುರುಕುಲಗಳ 39 ಮಂದಿ ಆಚಾರ್ಯ-ಮಾತೃಶ್ರೀಯರ ಉಪಸ್ಥಿತಿ ಇತ್ತು. ಬೆಳಿಗ್ಗೆ ೫.೦೦ರಾತ್ರಿ ೮.೦೦ ಗಂಟೆಯವರೆಗಿನ ದಿನಚರಿಯನ್ನು ರೂಪಿಸಿದ್ದು ಅನ್ಯಾನ್ಯ ವಿಷಯಗಳ ಬಗ್ಗೆ ಚಿಂತನ-ಮಂಥನ ನಡೆಸಲಾಯಿತು. ಹಿಂದಿನವರ್ಷದ ಅವಲೋಕನ ಮತ್ತು ಮುಂದಿನವರ್ಷದ ಆಯೋಜನೆ ಇದರಲ್ಲಿ ಸೇರಿತ್ತು.
ಈ ಪ್ರಶಿಕ್ಷಣವರ್ಗದಲ್ಲಿ ನಾವು ಸಾಮೂಹಿಕವಾಗಿ, ಕೆಲವೊಮ್ಮೆ ಕಾರ್ಯಾನುಭವದ ಆಧಾರದ ಮೇಲೆ ಪ್ರತ್ಯೇಕವಾಗಿ ಕುಳಿತು ಅನೇಕ ವಿಷಯಗಳನ್ನು ಸಂವಾದ ಮತ್ತು ಚರ್ಚೆಯ ಮೂಲಕವಾಗಿ ಹಿರಿಯರ ಮಾರ್ಗದರ್ಷನದಲ್ಲಿ ಚಿಂತನ-ಮಂಥನ ನಡೆಸಿದೆವು.
ಉದಾಹರಣೆಗೆ – ಗುರುಕುಲದಲ್ಲಿ ಆಚಾರ್ಯ-ಮಾತೃಶ್ರೀಯವರ ಪಾತ್ರ, ಸಂಶೋಧನೆಗೆ ಸಂಬಂಧಪಟ್ಟಂತಹ ಕಾರ್ಯವಿಧಾನಗಳು, ವಿದ್ಯಾರ್ಥಿಗಳ ಏಕಾಗ್ರತೆಯನ್ನು ವೃದ್ಧಿಸುವಲ್ಲಿ ಯೋಗಕೌಶಲಗಳು, ಸೃಜನಶೀಲ ವ್ಯಕ್ತಿತ್ವ, ವ್ಯಾವಹಾರಿಕ ಸಮಸ್ಯೆಗಳು ಮತ್ತು ಪರಿಹಾರ, ಪಾಠ್ಯಬಿಂದುಗಳ ಚಿಂತನೆ ಇತ್ಯಾದಿ.
ಈ ಎಲ್ಲದಕ್ಕೂ ಮುಖ್ಯವಾಗಿ ಈ ವರ್ಷದ ಪ್ರಶಿಕ್ಷಣವರ್ಗದಲ್ಲಿ ಶಿಕ್ಷಾವಲ್ಲಿಯ ಆಧಾರದಲ್ಲಿ ಗುರುಕುಲದ ಶಿಕ್ಷಣಸ್ತರಗಳಾದ ಅಧಿಶೀಲ, ಅಧಿಚಿತ್ತ ಮತ್ತು ಅಧಿಪ್ರಜ್ಞ ಶಿಕ್ಷಣದ ಸೂತ್ರಗಳ ವಿಶ್ಲೇಷಣೆ ಮಾಡಲಾಯಿತು. ಮತ್ತು ಆಚರ್ಯ-ಮಾತೃಶ್ರೀಯವರು ಕೈಗೊಳ್ಳಬಹುದಾದ ಸಂಶೋಧನಾ ವಿಧಾನದ ಬಗ್ಗೆ ಎಲ್ಲರಿಗೂ ಹೆಚ್ಚಿನ ಮಾಹಿತಿ ಸಿಗುವಂತಾಯಿತು.
ಪ್ರಶಿಕ್ಷಣದ ಅಂಗವಾಗಿ ಅರ್ಧದಿನದ ಮಟ್ಟಿಗೆ ಮೈತ್ರೇಯೀ ಗುರುಕುಲ, ವಿಟ್ಲದ ಪಂಚಲಿಂಗೇಶ್ವರ ದೇವಾಲಯ, ಕಲ್ಲಡ್ಕ ಶ್ರೀರಾಮ ಮಂದಿರಗಳನ್ನು ಸಂದರ್ಶಿಸುವ ಅವಕಾಶ ಕಲ್ಪಿಸಲಾಯಿತು.
ಈ ಐದೂ ದಿನಗಳ ಪ್ರಶಿಕ್ಷಣವರ್ಗದಲ್ಲಿ ಶ್ರೀಯುತ ರಾಮಚಂದ್ರ ಭಟ್ ಕೋಟೆಮನೆ, ಶ್ರೀ ಸೀತಾರಾಮ ಕೆದಿಲಾಯರು ಪೂರ್ಣದಿನಗಳ ಕಾಲ ನಮ್ಮೊಂದಿಗಿದ್ದು, ನಮಗೆ ಪ್ರೇರಣೆಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಗಣಿಯ S VYASA ವಿಶ್ವವಿದ್ಯಾಲಯದ ಯೋಗತಜ್ಞರಾದ ಶ್ರೀಯುತ ರಮೇಶ್ ಮತ್ತು ಶ್ರೀ ಅಪಾರ ಇವರು, ಶ್ರೀಯುತ ಪ್ರಕಾಶ್ ಮೂಡಿತ್ತಾಯ, ಶ್ರೀ ವೆಂಕಟರಮಣ ಅರ್ತಿಕಜೆ, ಶ್ರೀ ಪಟ್ಟಾಭಿರಾಮ, ಟಿ.ಎನ್. ಪ್ರಭಾಕರ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ವಾಸುದೇವ ಐತಾಳ್ ಮತ್ತು ಗುರುಕುಲದ ಹಿರಿಯ ಆಚಾರ್ಯ-ಮಾತೃಶ್ರೀಯರು ಮಾರ್ಗದರ್ಶನ ಮಾಡಿದರು.
ದಿನಾಂಕ ೧೯.೦೫.೨೪ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನನೀಯ ಸಹಸರಕಾರ್ಯವಾಹರಾದ ಮುಕುಂದರವರು ಪ್ರಶಿಕ್ಷಣದಲ್ಲಿ ನಮ್ಮೊಂದಿಗಿದ್ದು ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ವಿಶೇಷ ಸದವಕಾಶಗಳನ್ನು ಮಾರ್ಮಿಕವಾಗಿ ವಿಶ್ಲೇಷಿಸಿದರು. ಇವುಗಳೆಲ್ಲವೂ ಭಾರತೀಯ ಜ್ಞಾನಪರಂಪರೆಯ ಹೆಜ್ಜೆಗುರುತುಗಳೇ ಆಗಿದ್ದು ಇದನ್ನು ನಮ್ಮ ಗುರುಕುಲಗಳಲ್ಲಿ ರೂಢಿಸಿಕೊಳ್ಳುವ ವಿಶೇಷಸಂದರ್ಭ ಇದಾಗಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸಮರೊಹ ಕಾರ್ಯಕ್ರಮದ ಪಾಥೇಯ ನುಡಿಯನ್ನು ತಿಳಿಸುತ್ತಾ ಶ್ರೀಯುತ ರಾಮಚಂದ್ರ ಭಟ್ ರವರು ಪ್ರಶಿಕ್ಷಣವರ್ಗದಲ್ಲಿ ಪಡೆದ ಬುತ್ತಿಯನ್ನು ಮುಂದಿನ ಶೈಕ್ಷಣಿಕವರ್ಷದಲ್ಲಿ ವಿದ್ಯಾರ್ಥಿಗಳಿಗೆ ಹಂಚುತ್ತಾ ಸಾಧನಾ ಪಥದಲ್ಲಿ ಮುಂದೆ ಸಾಗೋಣ ಎಂಬ ಶುಭಾಶಂಸನೆಯನ್ನು ನೀಡಿದರು.
ಹೀಗೆ ಐದು ದಿನಗಳಕಾಲ ನರಿಕೊಂಬಿನ ಜನಕಲ್ಯಾಣ ಟ್ರಸ್ಟ್ ಆಶ್ರಯದಲ್ಲಿ ನಡೆದ ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗವು ಯಶಸ್ವಿಯಾಗಿ ಪೂರ್ಣಗೊಂಡಿದೆ.