ಅರ್ಧಮಂಡಲೋತ್ಸವ -ಉದ್ಘಾಟನ ಸಮಾರಂಭ – 2018

Share:
Date: March 27, 2018
Past Events

ನಮ್ಮ ಭಾರತೀಯ ಪರಂಪರೆಯಲ್ಲಿ 48 ವರ್ಷಗಳ ಸಮೂಹ ಮಂಡಲವೆಂದು ಗುರುತಿಸಲ್ಪಟ್ಟಿದೆ. ಆರಂಭಿಸಿದ ಕೆಲಸ ಅಥವಾ ಸಂಸ್ಥೆ 48 ರ ಈ ಕಾಲವನ್ನು ಪೂರೈಸಿದಾಗಲೇ ತನ್ನ ಗುರಿಯನ್ನು ತಲುಪಲು ಸಾಧ್ಯವಾಗುವುದು ಎಂಬ ಹಿನ್ನೆಲೆಯಲ್ಲಿ ಈ ಕಾಲನಿರ್ಣಯವನ್ನು ಮಾಡಲಾಗಿದೆ.

ಸ್ವಸ್ಥ ಸಮಾಜ ನಿರ್ಮಾಣ ಎಂಬ ಉದ್ದೇಶವನ್ನಿಟ್ಟುಕೊಂಡು ಆರಂಭವಾದ ಮೈತ್ರೇಯೀಗುರುಕುಲವು 24 ವರ್ಷಗಳ ತನ್ನ ಪಯಣವನ್ನು ಪೂರೈಸಿದ ಪ್ರಯುಕ್ತ ಅರ್ಧಮಂಡಲೋತ್ಸವವನ್ನು ಆಚರಿಸಲು ಸಂಕಲ್ಪಿಸಿತ್ತು. ಅಂತೆಯೇ ಚೈತ್ರ.ಶುದ್ಧ.ಏಕಾದಶಿ(27.03.18)ಯಂದು ಈ ಉತ್ಸವ ಉದ್ಘಾಟನೆಗೊಂಡಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನ್ಯ ಸರಸಂಘಚಾಲಕರಾದ ಪ.ಪೂ ಶ್ರೀ ಮೋಹನ್ ಜಿ ಭಾಗವತ್ ಇವರು ತೆನೆ ಅರಳಿಸುವುದರ ಮೂಲಕ ಅರ್ಧಮಂಡಲೋತ್ಸವವನ್ನು ಉದ್ಘಾಟಿಸಿ “ವಿದ್ಯಾರ್ಥಿಗಳಿಗೆ ಅಧ್ಯಾತ್ಮ ತಳಹದಿಯ ಶಿಕ್ಷಣವನ್ನು ನೀಡುವುದರ ಮೂಲಕ ಮತ್ತೆ ಭಾರತವನ್ನು ಜಗದ್ಗುರುವನ್ನಾಗಿಸಬೇಕಾಗಿದೆ” ಎಂದು ಪ್ರಬೋಧಿಸಿದರು.

ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು ಹಾಗು ಅರ್ಧಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮತ್ತು ಶ್ರೀಮತಿ ಅನ್ನಪೂರ್ಣಾ ಅಗಡಿಯವರು ವೇದಿಕೆಯಲ್ಲಿದ್ದು ಸಭೆಯನ್ನುದ್ದೇಶಿಸಿ ಮಾತನ್ನಾಡಿದರು.

ಗುರುಕುಲದ ಪರಿಚಯವನ್ನೊಳಗೊಂಡ 30 ನಿಮಿಷಗಳ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ವೇದಘೋಷದ ಮೂಲಕ ಆರಂಭಗೊಂಡ ಈ ಉದ್ಘಾಟನ ಸಮಾರಂಭದಲ್ಲಿ ಗುರುಕುಲ ಶಿಕ್ಷಣ ಪ್ರಕಲ್ಪದ ಪ್ರಮುಖರಾದ ಡಾ|| ರಾಮಚಂದ್ರ ಭಟ್ ಕೋಟೆಮನೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರ್ಧಮಂಡಲೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಹೆಗ್ಡೆ ಹಾಗು ಗುರುಕುಲದ ಅನೇಕ ಹಿರಿಯರು ಮತ್ತು ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೈದಿಕರಾಷ್ಟ್ರಗಾನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.